Wikipedia
Uppar is one of the tributaries of the river Kannadipuzha. ಉಪ್ಪಾರರು: ಪುರಾಣ, ಇತಿಹಾಸ, ಪ್ರಸ್ತುತ
ಹಸ್ತಿನಾವತಿ ಮತ್ತು ಅಯೋಧ್ಯೆ, ಇವೆರಡೂ ಕ್ಷತ್ರಿಯರ ಮೂಲಗಳು ಹಸ್ತಿನಾವತಿಯಲ್ಲಿ ಚಂದ್ರವಂಶವಾದರೆ, ಆಯೋಧ್ಯೆಯಲ್ಲಿ ಸೂರ್ಯವಂಶ ಹುಟ್ಟಿಕೊಂಡಿತ್ತು.
ಚಂದ್ರವಂಶದಲ್ಲಿ ಹಸ್ತಿ, ವೃಕ್ಷರಾಜ, ಭೀಮಸೇನ, ಪ್ರತೀಪ, ಶಂತನು, ಪಾಂಡವರು, ಕೌರವರು ಹುಟ್ಟಿಕೊಳ್ಳುತ್ತಾರೆ.
ಅಯೋಧ್ಯೆಯಲ್ಲಿ ಸೂರ್ಯವಂಶ ಹುಟ್ಟಿಕೊಳ್ಳುತ್ತದೆ. ಈ ವಂಶದವರಾಗಿ ಸಗರ ಚಕ್ರವರ್ತಿ, ಪಂಚಜನ, ಅಂಶುವಂತ, ದಿಲೀಪ ಚಕ್ರವರ್ತಿ, ಭಗೀರಥ, ಶ್ರುತ, ನಾಭಾಗ, ತನುಜಾತ, ಅಂಬರೀಷ, ಕಾರ್ತವೀರ್ಯರಾಜ, ಹರಿಶ್ಚಂದ್ರ, ದಶರಥ, ಶ್ರೀರಾಮ ಚಕ್ರವರ್ತಿ ಮೊದಲಾದವರು ಬರುತ್ತಾರೆ.
ಕಾಡಿನಲ್ಲಿ ಜಮದಗ್ನಿ ಮುನಿ ವಾಸಿಸುತ್ತಿರುತ್ತಾನೆ. ಈತನ ಮಡದಿ ರೇಣುಕಾದೇವಿ. ಇವರಿಗೆ ದೇವತೆಗಳು ವರವಾಗಿ ನೀಡಿದ ಕಾಮಧೇನು ಎಂಬ ಸುಂದರ ಕನ್ಯೆ ಇರುತ್ತಾಳೆ. ಜಮದಗ್ನಿ ಮತ್ತು ರೇಣುಕಾದೇವಿಗೆ ಪರಶುರಾಮನೆಂಬ ಧೈರ್ಯಶಾಲಿ ಮಗನಿರುತ್ತಾನೆ.
ಹೀಗೆ ಬೇಟೆಗೆಂದು ಕಾರ್ತವೀರ್ಯರಾಜ ಕಾಡಿಗೆ ತೆರಳುತ್ತಾನೆ. ಚಕ್ರವರ್ತಿಯನ್ನು ಕಂಡ ಜಮದಗ್ನಿ ಆತನನ್ನು ತನ್ನ ಮನೆಗೆ ಕರೆದೊಯ್ದು ಪುಷ್ಕಳ ಭೋಜನದೊಂದಿಗೆ ಆತಿಥ್ಯ ನೀಡುತ್ತಾನೆ. ಆಗ ಕಾರ್ತವೀರ್ಯರಾಜನ ಕಣ್ಣಿಗೆ ಬಿದ್ದದ್ದೇ ಕಾಮಧೇನು. ಆ ಕಾಮಧೇನುವೇ ಅರಸ ಮತ್ತು ಆತನ ಸೈನ್ಯಕ್ಕೆ ಪುಷ್ಕಳ ಭೋಜನ ನೀಡಿದ್ದನ್ನು ಆತ ಜಮದಗ್ನಿಯಿಂದ ತಿಳಿದುಕೊಳ್ಳುತ್ತಾನೆ.
ಈ ಸಂದರ್ಭದಲ್ಲಿ ಕಾಮಧೇನುವಿನ ಬಗ್ಗೆ ಆಸಕ್ತಿ ತಾಳಿದ ಕಾರ್ತವೀರ್ಯ ರಾಜ, ಇಂತಹ ಕಾಮಧೇನು ಅರಮನೆಯಲ್ಲಿ ಚಕ್ರವರ್ತಿಗಳ ಬಳಿ ಇರಬೇಕಾದವಳು ಕಾಡಿನಲ್ಲಿ ಏಕೆ ಇದ್ದಾಳೆ? ಎಂದು ಪ್ರಶ್ನಿಸಿ ಅದನ್ನು ತನ್ನೊಟ್ಟಿಗೆ ಕಳುಹಿಸಿಕೊಡುವಂತೆ ಜಮದಗ್ನಿಯಲ್ಲಿ ಕೇಳುತ್ತಾನೆ.
ಕಾಮಧೇನುವನ್ನು ದೇವತೆಗಳು ನನಗೆ ವರವಾಗಿ ಕೊಟ್ಟಿದ್ದಾರೆ. ಹಸ್ತಾಂತರಿಸಲು ಸಾಧ್ಯವಿಲ್ಲ. ದೇವತೆಗಳನ್ನು ಕೇಳಿ, ಅವರು ಒಪ್ಪಿದರೆ ಕಾಮಧೇನುವನ್ನು ನಿಮ್ಮೊಟ್ಟಿಗೆ ಕಳುಹಿಸಲು ನನ್ನದೇನೂ ಅಭ್ಯಂತರವಿಲ್ಲ ಎಂದು ಜಮದಗ್ನಿ ಹೇಳುತ್ತಾನೆ.
ಆಗ ಕಾರ್ತವೀರ್ಯರಾಜ ದೇವತೆಗಳ ಬಳಿ ಕೇಳಿಕೊಳ್ಳುತ್ತಾನೆ. ಆದರೆ, ದೇವತೆಗಳು ಒಪ್ಪುವುದಿಲ್ಲ. ಇದರ ಪರಿಣಾಮ ಬ್ರಹ್ಮ ಕುಲಕ್ಕೂ ಮತ್ತು ಕ್ಷತ್ರಿಯ ಕುಲಕ್ಕೂ ಸಂಘರ್ಷ ಏರ್ಪಡುತ್ತದೆ. ಕ್ಷಾತ್ರನಾದ ಕಾರ್ತವೀರ್ಯರಾಜ ಈ ಸಂಘರ್ಷದಲ್ಲಿ ಸೋಲನುಭವಿಸಿದನಾದರೂ ಆಕೆಯನ್ನು ಪಡೆಯಲೇಬೇಕೆಂಬ ಹಠ ಮಾತ್ರ ಬಿಡಲಿಲ್ಲ. ಕೃದ್ಧನಾಗಿ ಜಮದಗ್ನಿಯನ್ನು ಕೊಂದು ಕಾಮಧೇನುವನ್ನು ಹೊತ್ತೊಯ್ಯುತ್ತಾನೆ ಕಾರ್ತವೀರ್ಯರಾಜ. ಈ ವಿಚಾರವನ್ನು ರೇಣುಕಾದೇವಿ ತನ್ನ ಮಗ ಪರಶುರಾಮನಿಗೆ ತಿಳಿಸುತ್ತಾಳೆ. ಆಗ, ಪರಶುರಾಮ ಶಪಥವೊಂದನ್ನು ಮಾಡುತ್ತಾನೆ. ನನ್ನ ತಂದೆಯ ಹತ್ಯೆಗೆ ಪ್ರತಿಕಾರವಾಗಿ ಎಲ್ಲಾ ಕ್ಷತ್ರಿಯರನ್ನು ನಾಶ ಮಾಡುತ್ತೇನೆಂದು. ಪರಶುರಾಮ ತನ್ನ ಕೈಗೆ ಸಿಕ್ಕ ಕ್ಷತ್ರಿಯರನ್ನೆಲ್ಲಾ ಕೊಲ್ಲಲಾರಂಭಿಸಿದ. ಇದು ಮತ್ತಷ್ಟು ವಿಕೋಪಕ್ಕೆ ಹೋಗುತ್ತದೆ ಎಂಬುದನ್ನು ಅರಿತ ನಾರದ ಮುನಿ ಪರಶುರಾಮನನ್ನು ಕರೆದು, ನೀನು ಯಾವುದೇ ಕಾರಣಕ್ಕೂ ಪತ್ನಿಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿರುವ ಕ್ಷತ್ರಿಯನನ್ನು, ಪೂಜಾ ಕೈಂಕರ್ಯಗಳನ್ನು ಮಾಡುತ್ತಿರುವ ಕ್ಷತ್ರಿಯನನ್ನು ಕೊಲ್ಲಬಾರದು ಎಂದು ತಾಕೀತು ಮಾಡುತ್ತಾನೆ.
ಪರಶುರಾಮನ ಪರಾಕ್ರಮ ಕಂಡು ಬೆಚ್ಚಿದ ಬಹುತೇಕ ಕ್ಷತ್ರಿಯರು ತಾವೂ ನಾಶವಾಗಿಬಿಡುತ್ತೇವೆಂಬ ಕಾರಣಕ್ಕೆ ಶಸ್ತ್ರತ್ಯಾಗ ಮಾಡಿ, ದೇಶಾಂತರ ಓಡಿ ಹೋಗಿ ಹೊಟ್ಟೆಪಾಡಿಗಾಗಿ ಉಪಕಸುಬುಗಳನ್ನು ಹುಡುಕಿಕೊಂಡರು. ಹಾಗೆ ಉಪ್ಪು ತಯಾರಿಕೆ ಮತ್ತು ಮಾರಾಟವನ್ನು ಉಪಕಸುಬಾಗಿ ರೂಢಿಸಿಕೊಂಡು ಬಂದ ಕ್ಷತ್ರಿಯರೇ ಇಂದಿನ ಉಪ್ಪಾರ ಸಮುದಾಯದವರು.
ಇದು ಪುರಾಣ ಹೇಳುವ ಕತೆ. ಭಾರ್ಗವ ದಂಡಯಾತ್ರೆ ಮತ್ತು ಉಪ್ಪಾರ ಚರಿತಾಮೃತ ಗ್ರಂಥದಲ್ಲಿ ಉಪ್ಪಾರ ಹುಟ್ಟಿನ ಬಗ್ಗೆ ಈ ಉಲ್ಲೇಖವಿದೆ. ಭಗೀರಥ ತನ್ನ ತ್ಯಾಗ, ಸಮರ ನೈಪುಣ್ಯತೆ, ಚಾಣಾಕ್ಷ್ಯತೆ, ದಾನ, ಧೈರ್ಯ ಸೇರಿದಂತೆ ಹಲವು ಪ್ರಮುಖ ಕಾರಣಗಳಿಂದ ಉಪ್ಪಾರರ ಆರಾಧ್ಯ ದೈವವಾಗಿದ್ದಾನೆ.ಶಸ್ತ್ರತ್ಯಾಗ ಮಾಡಿ ದೇಶಾಂತರ ಓಡಿ ಹೋದ ಕ್ಷತ್ರಿಯರು ಅಲ್ಲಲ್ಲಿ ನೆಲೆಯೂರಿದರು. ಜವಳು ಭೂಮಿ ಮತ್ತು ಸಮುದ್ರದಂಡೆಯಲ್ಲಿ ಉಪ್ಪು ತಯಾರಿಕೆಯಲ್ಲಿ ತೊಡಗಿದರು. ಹೀಗಾಗಿಯೇ ಅವರು ಉಪ್ಪಾರರಾದರು.
ಪುರಾಣ ಕಾಲದಿಂದಲೂ ಉಪ್ಪು ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದ್ದ ಇವರ ಜೀವನ ಹಸನಾಗಿತ್ತು. ಆದರೆ, ದೇಶಕ್ಕೆ ಬ್ರಿಟಿಷರು ದಂಡೆತ್ತಿ ಬಂದಾಗ ಉಪ್ಪು ತಯಾರಿಕೆ ಒಂದು ಉದ್ಯಮವಾಗಿ ಕಂಡಿತು. ವ್ಯಾಪಾರೀ ಮನೋಭಾವದ ಬ್ರಿಟಿಷರು ದೇಶದಲ್ಲಿ ಉಪ್ಪು ತಯಾರಿಕೆ ಮೇಲೆ 1880 ರಲ್ಲಿ ನಿಷೇಧ ಹೇರಿದರು. ಇದರ ಪರಿಣಾಮ ಉಪ್ಪಾರರ ಬದುಕು ಬೀದಿಗೆ ಬಿತ್ತು. ಹೀಗಾಗಿ ಸಮುದಾಯದ ಬಹುಪಾಲು ಕುಟುಂಬಗಳು ಕೃಷಿಯನ್ನು ಅವಲಂಬಿಸಿದರೆ, ಮತ್ತೆ ಹಲವು ಕುಟುಂಬಗಳು ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಾ ಬಂದರು. ಅವರ ಈ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ.
ರಾಜ್ಯದಲ್ಲಿ ಉಪ್ಪಾರರ ಸಂಖ್ಯೆ ಸುಮಾರು 15 ಲಕ್ಷಕ್ಕೂ ಅಧಿಕ ಇದೆ. ಚಾಮರಾಜನಗರ, ಮೈಸೂರು, ಬೆಳಗಾವಿ, ಚಿತ್ರದುರ್ಗ, ಬಿಜಾಪುರ, ಕೊಪ್ಪಳ, ಬಳ್ಳಾರಿ, ತುಮಕೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಉಪ್ಪಾರರು ಎಲ್ಲಾ ತಾಲೂಕುಗಳಲ್ಲಿ ವಾಸವಾಗಿದ್ದಾರೆ.
ಉಪ್ಪಾರ, ಬೆಲ್ದರ್, ಲೋನಾರಿ, ಮೇಲುಸಕ್ಕರೆಯವರು, ನಾಮದಉಪ್ಪಾರ, ಉಪ್ಪಲಿಗ, ಸುಣ್ಣದ ಉಪ್ಪಾರ, ಉಪ್ಪಾರ ಸೆಟ್ಟಿ ಸೇರಿದಂತೆ 22 ಕ್ಕೂ ಹೆಚ್ಚು ಉಪಪಂಗಡಗಳಿವೆ. ಆದರೆ, ಈ ಉಪಪಂಗಡಗಳಲ್ಲಿ 150 ಕ್ಕೂ ಹೆಚ್ಚು ಬೆಡಗುಗಳಿವೆ. ಈ ಬೆಡಗುಗಳ ವಿಶೇಷವೆಂದರೆ, ಸಸ್ಯ ಅಥವಾ ಪ್ರಾಣಿಯ ಹೆಸರಿನಿಂದ ಗುರುತಿಸಲಾಗುತ್ತದೆ. ಅಂದರೆ, ಅಗಿಲ ಕುಲದವರು, ಆನೆ, ನರಿ, ನಾಗರ, ಕೆಂಡ, ಕುದುರೆ, ಛತ್ರಿ, ಹೊಂಗೆ,ನೇರಳೆ, ಬೇಲದ, ಮುಚ್ಚಳ, ದೊಡ್ಡಿ, ಹೊನ್ನು, ಕರಗ, ಕೊತ್ತಂಬರಿ, ಮಲ್ಲಿಗೆ, ಸಕ್ಕರೆ, ಕಲ್ಲುಸಕ್ಕರೆ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇತರೆ ಸಮುದಾಯದ ರೀತಿಯಲ್ಲಿ ಇಲ್ಲಿ ಒಂದೇ ಬೆಡಗಿನವರು ಪರಸ್ಪರ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಶೈವ ಮತ್ತು ವೈಷ್ಣವ ಅನುಯಾಯಿಗಳಾಗಿದ್ದು, ಕೆಲವು ಬೆಡಗಿನವರು ಜನಿವಾರ ಧರಿಸುವ ಸಂಪ್ರದಾಯವೂ ಇದೆ.
ವಿಶಿಷ್ಟ ನ್ಯಾಯಪದ್ಧತಿಯನ್ನು ಇಂದಿಗೂ ರೂಢಿಸಿಕೊಂಡುಬರಲಾಗುತ್ತಿದೆ. ಇವರ ನ್ಯಾಯಪದ್ಧತಿ ಸುಪ್ರಸಿದ್ಧ ನ್ಯಾಯ ನಿಷ್ಣಾತನಾಗಿದ್ದ ಹಮ್ಮುರಬಿಯನ್ನು ನೆನಪಿಸುತ್ತದೆ. ಅಂದರೆ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿರುವ ಉಪ್ಪಾರ ಜನಾಂಗದ ಗ್ರಾಮಗಳಲ್ಲಿ ಒಬ್ಬ ಯಜಮಾನ ಇರುತ್ತಾನೆ. ಐದು ಗ್ರಾಮಗಳು ಸೇರಿ ಒಂದು ಒಕ್ಕೂಟ ರಚಿಸಿಕೊಳ್ಳುತ್ತಾರೆ. ಐದು ಗ್ರಾಮಗಳ ಯಜಮಾನನ ಮನೆಯ ಕಟ್ಟೆ ನ್ಯಾಯಕಟ್ಟೆಯಾಗಿರುತ್ತದೆ. ಅಲ್ಲಿ ವಿವಾದಗಳನ್ನು ಬಗೆಹರಿಸಲಾಗುತ್ತದೆ.
ಇಂತಹದ್ದೊಂದು ವೈಶಿಷ್ಟ್ಯಪೂರ್ಣವಾದ ಪದ್ಧತಿಯನ್ನು ಇನ್ನೂ ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಬಂದಿರುವ ಉಪ್ಪಾರರ ಇಂದಿನ ಸಾಮಾಜಿಕ ಪರಿಸ್ಥಿತಿ ಹೇಳಿಕೊಳ್ಳುವ ಮಟ್ಟಿಗೆ ಸುಧಾರಣೆ ಕಂಡಿಲ್ಲ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಇರುವ ಪುರುಷರು ಶೇ. 15 ರಿಂದ 20 ರಷ್ಟು ಅಕ್ಷರಸ್ಥರಾಗಿದ್ದರೆ, ಕೇವಲ ಶೇ. 10 ಕ್ಕಿಂತ ಕಡಿಮೆ ಮಹಿಳೆಯರು ಅಕ್ಷರ ಕಲಿತಿದ್ದಾರೆ. ಒಟ್ಟಾರೆ ಸಮುದಾಯದ ಸಾಕ್ಷರತೆ ಶೇ. 15 ನ್ನು ಮೀರುವುದಿಲ್ಲ.
ಬಹುತೇಕ ಕುಟುಂಬಗಳು ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಸಮುದಾಯದಲ್ಲಿ ಶೇ. 85 ಕ್ಕಿಂತಲೂ ಹೆಚ್ಚು ಕುಟುಂಬಗಳ ವಾರ್ಷಿಕ ಆದಾಯ 5 ಸಾವಿರಕ್ಕಿಂತಲೂ ಕಡಿಮೆ ಎಂದು ಅಧ್ಯಯನ ನಡೆಸಿದ ಆಯೋಗಗಳು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿವೆ. ವಾರ್ಷಿಕ 20 ಸಾವಿರಕ್ಕಿಂತಲೂ ಅಧಿಕ ಆದಾಯ ಇರುವ ಕುಟುಂಬಗಳ ಸಂಖ್ಯೆ ಶೇ. 5 ನ್ನೂ ಮೀರುವುದಿಲ್ಲ ಎಂಬ ಅಂಶ ಅಧ್ಯಯನದಿಂದ ಕಂಡುಬಂದಿದೆ.
ಇನ್ನು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಉಪ್ಪಾರರನ್ನು ಪ್ರವರ್ಗ-1 ರಲ್ಲಿ ಸೇರ್ಪಡೆ ಮಾಡಲಾಗಿದೆ. ಈ ವರ್ಗದಲ್ಲಿ 85 ಕ್ಕೂ ಹೆಚ್ಚು ಜಾತಿಗಳಿದ್ದು ಮೀಸಲಾತಿಗಾಗಿ ಪರಸ್ಪರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಜನಾಂಗದ್ದಾಗಿದೆ. ರಾಜಕೀಯವಾಗಿ ಹೇಳುವುದಾದರೆ ಇದುವರೆಗೆ ಯು.ಭೂಪತಿ, ಮಸಣ ಶೆಟ್ಟಿ, ಜವರಾಯಶೆಟ್ಟಿ, ಎಚ್.ಸಿ.ನೀರಾವರಿ, ಪುಟ್ಟರಂಗಶೆಟ್ಟಿ ಅವರನ್ನು ಹೊರತುಪಡಿಸಿದರೆ ಇತರೆ ಯಾರೊಬ್ಬರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ.
ಚುನಾವಣೆ ವೇಳೆ ಕೆಲವು ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರು. ಆದರೆ, ಈ ಸಮುದಾಯದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಮೀಸಲಾತಿ ಬರುವ ಕಾರಣ ಎಸ್ಸಿ ಅಥವಾ ಎಸ್ಟಿಗೆ ಕ್ಷೇತ್ರಗಳು ಮೀಸಲಾಗುವುದರಿಂದ ಸ್ಪರ್ಧೆಯಿಂದ ದೂರ ಉಳಿಯಬೇಕಾಗುತ್ತಿದೆ.
ಇತ್ತೀಚೆಗೆ ಶೈಕ್ಷಣಿಕವಾಗಿ ಸ್ವಲ್ಪ ಮುಂದೆ ಬರುತ್ತಿರುವ ಸಮುದಾಯದ ಹತ್ತಾರು ಅಭ್ಯರ್ಥಿಗಳು ವೈದ್ಯರು, ಎಂಜಿನಿಯರ್್ನಂತಹ ಉತ್ತಮ ಉದ್ಯೋಗ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖಂಡರು ಹಲವು ಬಾರಿ ಸರ್ಕಾರಗಳಿಗೆ ಮನವಿ ಮಾಡಿದ್ದರೂ ಸಾಧ್ಯವಾಗಿಲ್ಲ.
ಉಪ್ಪಾರರ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸಲು ಹಿಂದಿನ ಸರ್ಕಾರ ಪ್ರಯತ್ನ ನಡೆಸಿ ಅದಕ್ಕಾಗಿ 5 ಕೋಟಿ ಮೀಸಲಿಟ್ಟಿತ್ತಾದರೂ ನಂತರ ಬಂದ ಸರ್ಕಾರ ಆ ಪ್ರಸ್ತಾವನೆಯನ್ನೇ ಕೈಬಿಟ್ಟಿದೆ. ಇದರ ಪರಿಣಾಮ ಉಪ್ಪಾರರಿಗೆ ನಿಗಮವೆಂಬುದು ಗಗನ ಕುಸುಮವಾದಂತಾಗಿದೆ.'Kannadipuzha'' is one of the main tributaries of the river Bharathapuzha, the second-longest river in Kerala, south India.